ವರ್ಸೇಲ್ಸ್ ಒಪ್ಪಂದ - 
	ಒಂದನೆಯ ಮಹಾಯುದ್ಧದ ಅನಂತರ ಶಾಂತಿ ಸ್ಥಾಪನೆಗಾಗಿ ಮಿತ್ರರಾಷ್ಟ್ರಗಳು ಜರ್ಮನಿಯೊಡನೆ ಮಾಡಿಕೊಂಡ ಒಪ್ಪಂದ. ವರ್ಸೇಲ್ಸ್ ಪ್ಯಾರಿಸ್ ನಗರದ ಆಗ್ನೇಯ ಭಾಗದಲ್ಲಿರುವ ಭವ್ಯವಾದ ಐತಿಹಾಸಿಕ ಸ್ಥಳ. ಪ್ಯಾರಿಸ್ ನಗರದಿಂದ 18ಕಿಮೀ ದೂರದಲ್ಲಿದೆ. ಇಲ್ಲಿ 13ನೆಯ ಲೂಯಿ ಕಾಲದಲ್ಲಿ ನಿರ್ಮಿಸಲಾದ ಸುಂದರ ಅರಮನೆಯಿದೆ. ಇದು 100 ವರ್ಷಕ್ಕೂ ಹೆಚ್ಚು ಕಾಲ ಫ್ರಾನ್ಸ್‍ದೊರೆಗಳ ಅಧಿಕೃತ ನಿವಾಸವಾಗಿತ್ತು. ಪ್ರಸ್ತುತ ಇದು ರಾಷ್ಟ್ರೀಯ ವಸ್ತು ಸಂಗ್ರಹಾಲಯವಾಗಿದೆ. ಇದು ಪ್ರಪಂಚದ ವಿಶಾಲ ಅರಮನೆಗಳಲ್ಲಿ ಒಂದಾಗಿದೆ. 1,300 ಕೋಣೆಗಳನ್ನು ಹೊಂದಿದೆ. ಯುರೋಪಿನ ಪ್ರಖ್ಯಾತ ಕಲಾವಿದರಿಂದ ರಚಿಸಲಾಗಿರುವ ವಾಸ್ತುಶಿಲ್ಪ ಹಾಗೂ ಚಿತ್ರಕಲೆಗೆ ಈ ಅರಮನೆ ಪ್ರಸಿದ್ಧವಾಗಿದೆ. ಅರಮನೆಯ ವಾಸ್ತುಶಿಲ್ಪ ಫ್ರೆಂಚ್‍ದೇಶದ ಲೂಯಿಸ್ ಲಿವೆವ್ ಈ ಸ್ಥಳದಲ್ಲಿ 1919ರಲ್ಲಿ ನಡೆದ ಐತಿಹಾಸಿಕ ಒಪ್ಪಂದದಿಂದಾಗಿ ಪ್ರಪಂಚಖ್ಯಾತವಾಗಿದೆ. ಒಂದನೆಯ ಮಹಾಯುದ್ಧಾ ನಂತರ ಶಾಂತಿ ಸ್ಥಾಪಿಸುವ ಪ್ರಯತ್ನಗಳು ನಡೆದವು. ಅಮೆರಿಕ ಅಧ್ಯಕ್ಷ ವುಡ್ರೋವಿಲ್ಸನ್, ಫ್ರಾನ್ಸಿನ ಕ್ಲೆಮೆಂಚು, ಬ್ರಿಟನ್ನಿನ ಲಾರ್ಡ್‍ಜಾರ್ಜ್, ಇಟಲಿಯ ಆರ್ಲೆಂಡೋ ಈ ನಾಯಕರೇ ಒಪ್ಪಂದದ ಪ್ರಮುಖರು. ವರ್ಸೇಲ್ಸ್ ಒಪ್ಪಂದಕ್ಕೆ ಜರ್ಮನ್ ಪ್ರತಿನಿಧಿಗಳು 1919 ಜೂನ್ 28ರಂದು ಸಹಿಹಾಕಿದರು. ಯುದ್ಧದಲ್ಲಾದ ವಿನಾಶ ಮತ್ತು ವಿಪತ್ತಿಗೆ ಜರ್ಮನಿಯನ್ನು ಹೊಣೆಯನ್ನಾಗಿ ಮಾಡಿ ಕಠಿಣವಾದ ಷರತ್ತುಗಳನ್ನು ವಿಧಿಸಲಾಯಿತು, ಸೋತ ಜರ್ಮನಿ ಎಲ್ಲ ಷರತ್ತುಗಳನ್ನು ಒಪ್ಪಿತು. ಒಪ್ಪಂದದ ಮುಖ್ಯ ಕರಾರುಗಳಿವು: ಜರ್ಮನಿ ಫ್ರಾನ್ಸ್‍ನಿಂದ ಕಿತ್ತುಕೊಂಡಿದ್ದ ಅಲ್ಸೈಸ್ ಮತ್ತು ಲೋರೈನ್ ಪ್ರಾಂತ್ಯಗಳನ್ನು ಫ್ರಾನ್ಸ್‍ಗೆ ಬಿಟ್ಟುಕೊಡುವುದು; ಬೆಲ್ಜಿಯಮ್‍ಗೆ ಆದ ನಷ್ಟಕ್ಕೆ ಮಾರ್ಸೆನೆಟ್, ಯೂಫೆನ್, ಮೆಸದಿಗಳನ್ನು ಕೊಡುವುದು; ಫ್ರಾನ್ಸಿನ ನಷ್ಟತುಂಬಲು 15ವರ್ಷಗಳವರಗೆ ಖನಿಜ ಸಂಪತ್ತಿನ ಸಾರ್ ಕಣಿವೆಯನ್ನು ಬಿಟ್ಟುಕೊಡುವುದು; 1864ರಲ್ಲಿ ವಶಪಡಿಸಿಕೊಂಡಿದ್ದ ಡೇನಿಷ್ ಜಿಲ್ಲೆಯ ಪ್ಲೇಷ್, ಹಾಲ್‍ಸ್ಟೈನ್‍ಗಳನ್ನು ಡೆನ್ಮಾರ್ಕಿಗೆ ಹಿಂದಿರುಗಿಸುವುದು; ಜರ್ಮನಿಯ ಡೇನ್‍ಜಿಗ್ ನಗರವನ್ನು ಮುಕ್ತನಗರವೆಂದು ಸಾರಿ ರಾಷ್ಟ್ರಸಂಘದ ಉಸ್ತುವಾರಿಗೆ ಒಪ್ಪಿಸುವುದು; ಮೆಮಲ್‍ನಗರ ಲಿಥುವೇನಿಯಕ್ಕೆ ದೊರೆಯುವುದು; ಸೈಲಿಸಿಯ ಪ್ರದೇಶ ಪೋಲೆಂಡಿನ ಅಧೀನವಾಗುವುದು. ಹೊಸದಾಗಿ ಅಸ್ಥಿತ್ವಕ್ಕೆ ಬಂದ ಪೋಲೆಂಡ್, ಚೆಕೊಸ್ಲೊವಾಕಿಯ ರಾಜ್ಯಗಳ ಮತ್ತು ಬೆಲ್ಜಿಯಂನ ಪ್ರಭುತ್ವವನ್ನು ಮಾನ್ಯ ಮಾಡುವುದು. ಇದರಿಂದ ಜರ್ಮನಿಯ ಆಫ್ರಿಕದ ವಸಾಹತುಗಳಲ್ಲಿ ಮತ್ತು ಯುರೋಪಿನ ಹೊರಗಿದ್ದ ಪ್ರದೇಶಗಳಲ್ಲಿ ಅನುಭವಿಸುತ್ತಿದ್ದ ವಿಶೇಷ ರಿಯಾಯಿತಿಗಳನ್ನು ತ್ಯಜಿಸಬೇಕಾಯಿತು.  ಒಕ್ಕೂಟ ರಾಷ್ಟ್ರಗಳ ಅನುಮತಿ ಇಲ್ಲದೆ ಜರ್ಮನಿ ಮತ್ತು ಆಸ್ಟ್ರಿಯ ನಡುವೆ ಯಾವುದೇ ರಾಜಕೀಯ ಸಂಘರ್ಷವೂ ಏರ್ಪಡಕೂಡದೆಂದು ಆಸ್ಟ್ರಿಯವನ್ನು ಹಂಗರಿಯಿಂದ ಪ್ರತ್ಯೇಕಿಸಿ ಸಣ್ಣ ರಾಜ್ಯವಾಗಿ ಮಾಡಲಾಯಿತು. ಆಸ್ಟ್ರಿಯದಿಂದ ಬೊಟಜನ್, ಟ್ರಂಚ್ ಟ್ರೆಸ್ಟ್ ಮತ್ತು ಇಟಲಿಯನ್ನೊಳಗೊಂಡ ದಕ್ಷಿಣ ಟೈರಾಲ ಹಾಗೂ ಏಡ್ರಿಯಾಟಿಕ್‍ನ ಎರಡು ದ್ವೀಪಗಳನ್ನು ಇಟಲಿ ಪಡೆಯಿತು. ಸ್ಲಾವ್ ಸಂಸ್ಥಾನಗಳಾದ ಬೋಸ್ನಿಯ, ಹರ್ಜಗೋವಿನ, ಕ್ರೋಷಿಯ ಮತ್ತಿತರ ಪ್ರದೇಶ ಸರ್ಬಿಯಕ್ಕೆ ಸೇರಿಕೊಂಡವು. ಟಾನ್ಸಿಲ್‍ವೇನಿಯವನ್ನು ರೊಮೇನಿಯ ಪಡೆಯಿತು. ಮತ್ತೊಮ್ಮೆ ಪ್ರಪಂಚದ ಶಾಂತಿಯ ಕದಡದಂತೆ ಜರ್ಮನಿಯನ್ನು ಬಲಹೀನಗೊಳಿಸುವುದು ವರ್ಸೇಲ್ ಒಪ್ಪಂದದ ಗುರಿಯಗಿತ್ತು. ಒಪ್ಪಂದವು ಹಲವು ನ್ಯೂನತೆಗಳಿಂದ ಕೂಡಿದ್ದರಿಂದ ಒಂದನೆಯ ಮಹಾಯುದ್ಧಕ್ಕೆ ಅಂತ್ಯವನ್ನು ಹೇಳಿದರೂ ಎರಡನೆಯ ಮಹಾಯುದ್ಧಕ್ಕೆ ನಾಂದಿಯಾಯಿತು.										
	(ಎಮ್.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ